Friday, October 13, 2006

ಅವ್ವ ಅಲ್ಲವೋ....ನಾ... ನಿನ್ನ ಅಕ್ಕ...

ಅವ್ವ ಅಲ್ಲವೋ....

ನಾ... ನಿನ್ನ ಅಕ್ಕ...

ಬೆಕ್ಕು ಕಂಡರು ಪಕ್ಕನೆ ತೆಕ್ಕಿಬೀಳುವ

ಕಪ್ಪು ಕತ್ತಲ ಪರದೆಗೂ ರೆಪ್ಪೆ ಬಿಗಿಯುವ

ಪುಟು ಪುಟು ಹೆಜ್ಜೆಯ ಪುಕ್ಕನನ್ನು

ಲಂಗದ ನಿರಿಗೆಯಲ್ಲಿ ಬಚ್ಚಿಟ್ಟುಕೊಂಡವಳು...

ಮಣ್ಣು ಗೋಡೆಗೆ ಮೊಳೆ ಹೊಡೆದು

ನಿನ್ನ ಚೋಟುದ್ದದ ಅಂಗಿ ಚಡ್ಡಿ ಸಿಕ್ಕಿಸಿ

ಅರಳುಗಣ್ಣಿಗೆ ತುಂಬಿಸಿ

ಚಪ್ಪಳೆ ತಟ್ತಿ ಕುಣಿದವಳು....

ಅಪ್ಪ ಕೊಟ್ಟ ಒಂದೇ ದುಡ್ಡಿಗೆ

ಎರಡು ಬಂಬೈ ಮಿಠಾಯಿ ಗುಡ್ಡಗಳು

ನಿಂದೆಲ್ಲ ನುಂಗಿ, ನನ್ನದೂ

ಇಡಿಯಾಗಿ ನೆಕ್ಕಿ ನಕ್ಕಾಗ

ದನಿ ಎತ್ತದೆ ಜೊಲ್ಲು ನುಂಗಿದವಳು....

ಬಾಗಿಲು ದಾತಟುತ್ತಲೇ ಬಗಲೇರಿ ಕುಂತು

ಒಲ್ಲದ ಶಾಲೆಯ ಹಾದಿಯ

ನಡುವೆ ... ಕಲ್ಲ ಮೇಲೆ ಗುದುಮುರುಗಿ

ಅತ್ತು ಕರೆದು ... ಚೂರಿ-ಗೀರಿ

ಅಕ್ಕೊರು ಕಾಣುತ್ತಲೇ ಗಪ್ ಚಿಪ್....

ಎಳೇ ಉಗುರಿನ ಗೀರೂ

ನೆತ್ತರು ಜಿನುಗಿಸಿದ ಕೈಯ

ಅವ್ವನ ಮುಂಚಾಚಿ

ಲಂಗದ ಚುಂಗಿನಿಂದ ಕಣ್ಣೊತ್ತಿಕೊಂಡಾಗ...

'ಛೀ ... ಸಣ್ಣ ತಮ್ಮ ಚೂರಿದರ

ಬಿಕ್ಕಿ ಬಿಕ್ಕಿ ಅಳತೀಯ.......

ಹುಚ್ಚೀ ಹಳೆ ಹುಚ್ಚಿ ಎಂದಾಗ....

ಅವರೆ ಚಪ್ಪರದಡಿ ಅಡಗಿ .... ಉಡುಗಿ...

ಉಫ್ ಉಫ್ ಊದಿಕೊಂಡವಳು..

ಇಲ್ಲಿ... ಇಲ್ಲೀಗ ...

ನನ್ನ ಖೋಲಿಯ ಗೋಡೆಯ ಮೂಲೆಗೆ

ಕೊಟ್ಟ ಮನೆಯ ದತ್ತ ನೆನಪಿಗೆ

ಗುರುತಾಗಿ ಉಳಿದವರ.....

ಕೈಯ ಹಿಡಿದವರ ... ಒಡನೆ ನಡೆದವರ ....

ಬಳಗ... ಭಾವ ಚಿತ್ರಗಳ ಸಾಲು

ಎಲ್ಲಕೂ ಸೇರಿ ಸುತ್ತು ಬಂದ

ಗಂಧ ಆರಿದ ಗಂಧದ ಹಾರ....

ಕಳೆದು ಹೋದವರು ಕ್ರಮವಾಗಿ ಕುಂತಿಲ್ಲ

ಅಲ್ಲಿ.......

ವಯಸು ವಯಸಿನ ಸರದಿ ಸಾಲು ಅಲ್ಲ

ಅಂಗಿ ತೊಟ್ಟ ತಂಗಿ..... ಪಟಗ ಸುತ್ತಿದ ಅಪ್ಪ....

ಟೈ ಕಟ್ಟಿದ ಅಣ್ಣ...

ಮುಸುಕು ಸೆರಗಿನ ಅವ್ವ ಕೊನೆಗೆ.......

ಯಾರ ಭಾವಚಿತ್ರದ ನೋಟ

ಯಾರ ಕಣ್ಣಿಗೆ ಉಂಟೋ

ಬದುಕು .... ಆದರೂ... ಇದಕೂ

ಭಾವ ಬಂಧುರದ ನಂಟು

ಅವ್ವ ಅಲ್ಲವೋ ... ನಾ ನಿನ್ನ ಅಕ್ಕ

ಹೇಳದೆ ಹೇಗಿರಲಿ ... ?

ಹೆಕ್ಕದೇ ಹೇಗಿರಲಿ

ಅದು ನನ್ನ ನೆನಪಿನ ಬಿಕ್ಕು.....

ಅನಸೂಯ ಸಿಧ್ಧರಾಮ

Tuesday, October 03, 2006

ನನ್ನ ಬುತ್ತಿಯ ಮೊದಲ ತುತ್ತ್ತು....

.. ಇದು ಬದುಕಿನ ಕೊಂಡಿ
ಜೀವ ಜೀವಂತಿಕೆಯ ಕಿಂಡಿ
ಯಾರೂ ಇಣುಕಬಹುದು ಇಲ್ಲಿ
ಕೊಂಕು ಕೆಣಕು ಇಲ್ಲಿಲ್ಲ
ನೋವು-ನಲಿವು, ಒಲವು-ಗೆಲುವು
ನಮ್ಮದು ನಿಮ್ಮದು ... ಎಲ್ಲರದು ಇಲ್ಲಿ ....

'ಅನಸುಯಾ ಸಿಧ್ಧರಾಮ' ನನ್ನ ಗುರುತಿನ ಹೆಸರು,
ಓದು, ಬರೆಹ ನನ್ನ ಹವ್ಯಾಸ... ಹುಚ್ಚು,
ನನ್ನ ಪ್ರೀತಿಯ ಹುಚ್ಚಿಗೆ ಎಚ್ಚ ಎರೆದವರು, ಸಂಗಾತಿ ಸಿಧ್ಧರಾಮ,
ಸಾಹಿತ್ಯ ನನ್ನ ಖುಷಿ, ಸಾಹಿತಿಗಳು ನನ್ನ ಅಭಿಮಾನ,
ಮೊದಲ ಬರಹ ಅಚ್ಚು ಹಾಕಿದ್ದು ತುಷಾರ. ಅದು, 1980 ರ ಹೊತ್ತು, ನಂತರದ್ದೆಲ್ಲ, ತರಂಗ, ಸುಧಾ, ಮಲ್ಲಿಗೆ, ಸಂಯುಕ್ತ ಕರ್ನಾಟಕ, ಸುದ್ದಿ ಸಂಗಾತಿ, ಕನ್ನಡ ಸಾಹಿತ್ಯಪರಿಷತ್ತು, ಕನ್ನಡ ಸಾಹಿತ್ಯ ಅಕಾಡಮಿಯ ಪುಸ್ತಕಗಳು ಮತ್ತು ಧಾರವಾಡ ನಿಲಯದ ಬಾನುಲಿ ಕದ ತೆರೆದದ್ದು.

ಬರೆಯಲು ಹಚ್ಚಿದಾ ಆಸಕ್ತಿ.... ಓದುಗರ ಅನಿಸಿಕೆ ಅರಿಯುವ ಕಾತರ ಹುಟ್ಟು ಹಾಕುತ್ತದೆ,
ಹಂಚಿಕೊಂಡಾಗ ............... ಭಾವುಕತೆ ಆಪ್ತವಾಗಿ ಕಟ್ತಿ ಹಾಕುತ್ತದೆ...
ಹಾಂ.... ಹೀಗೆ, ನನ್ನ ಕುತೂಹಲ, ಕೌತುಕ, ಕಾಳಜಿ-ಕಳಕಳಿ ಭಾವ ಬಂಧುರತೆಯ ಬುತ್ತಿಗಂಟು ಬಿಚ್ಚಿಡುವ ಬಯಕೆ, ಪರಸ್ಪರ ಸನಿಯ ಕುಂತು, ಸವಿಯುವ ಆಸೆ.

ಇಗೊಳ್ಳಿ ಇಂದಿನಿಂದ ನನ್ನ ಬುತ್ತಿಯ ಒಂದು ತುತ್ತು ನಿಮಗೆ....
ನಿಮ್ಮ ಬುತ್ತಿಯ ಒಂದು ತುತ್ತು ನನಗೆ,

ಸರಿ ...... ಬಿಚ್ಚಿಡಲೇ .... ನನ್ನ ಬುತ್ತಿ...?!

'ಅನಸೂಯ ಸಿಧ್ಧರಾಮ್'