Friday, October 13, 2006

ಅವ್ವ ಅಲ್ಲವೋ....ನಾ... ನಿನ್ನ ಅಕ್ಕ...

ಅವ್ವ ಅಲ್ಲವೋ....

ನಾ... ನಿನ್ನ ಅಕ್ಕ...

ಬೆಕ್ಕು ಕಂಡರು ಪಕ್ಕನೆ ತೆಕ್ಕಿಬೀಳುವ

ಕಪ್ಪು ಕತ್ತಲ ಪರದೆಗೂ ರೆಪ್ಪೆ ಬಿಗಿಯುವ

ಪುಟು ಪುಟು ಹೆಜ್ಜೆಯ ಪುಕ್ಕನನ್ನು

ಲಂಗದ ನಿರಿಗೆಯಲ್ಲಿ ಬಚ್ಚಿಟ್ಟುಕೊಂಡವಳು...

ಮಣ್ಣು ಗೋಡೆಗೆ ಮೊಳೆ ಹೊಡೆದು

ನಿನ್ನ ಚೋಟುದ್ದದ ಅಂಗಿ ಚಡ್ಡಿ ಸಿಕ್ಕಿಸಿ

ಅರಳುಗಣ್ಣಿಗೆ ತುಂಬಿಸಿ

ಚಪ್ಪಳೆ ತಟ್ತಿ ಕುಣಿದವಳು....

ಅಪ್ಪ ಕೊಟ್ಟ ಒಂದೇ ದುಡ್ಡಿಗೆ

ಎರಡು ಬಂಬೈ ಮಿಠಾಯಿ ಗುಡ್ಡಗಳು

ನಿಂದೆಲ್ಲ ನುಂಗಿ, ನನ್ನದೂ

ಇಡಿಯಾಗಿ ನೆಕ್ಕಿ ನಕ್ಕಾಗ

ದನಿ ಎತ್ತದೆ ಜೊಲ್ಲು ನುಂಗಿದವಳು....

ಬಾಗಿಲು ದಾತಟುತ್ತಲೇ ಬಗಲೇರಿ ಕುಂತು

ಒಲ್ಲದ ಶಾಲೆಯ ಹಾದಿಯ

ನಡುವೆ ... ಕಲ್ಲ ಮೇಲೆ ಗುದುಮುರುಗಿ

ಅತ್ತು ಕರೆದು ... ಚೂರಿ-ಗೀರಿ

ಅಕ್ಕೊರು ಕಾಣುತ್ತಲೇ ಗಪ್ ಚಿಪ್....

ಎಳೇ ಉಗುರಿನ ಗೀರೂ

ನೆತ್ತರು ಜಿನುಗಿಸಿದ ಕೈಯ

ಅವ್ವನ ಮುಂಚಾಚಿ

ಲಂಗದ ಚುಂಗಿನಿಂದ ಕಣ್ಣೊತ್ತಿಕೊಂಡಾಗ...

'ಛೀ ... ಸಣ್ಣ ತಮ್ಮ ಚೂರಿದರ

ಬಿಕ್ಕಿ ಬಿಕ್ಕಿ ಅಳತೀಯ.......

ಹುಚ್ಚೀ ಹಳೆ ಹುಚ್ಚಿ ಎಂದಾಗ....

ಅವರೆ ಚಪ್ಪರದಡಿ ಅಡಗಿ .... ಉಡುಗಿ...

ಉಫ್ ಉಫ್ ಊದಿಕೊಂಡವಳು..

ಇಲ್ಲಿ... ಇಲ್ಲೀಗ ...

ನನ್ನ ಖೋಲಿಯ ಗೋಡೆಯ ಮೂಲೆಗೆ

ಕೊಟ್ಟ ಮನೆಯ ದತ್ತ ನೆನಪಿಗೆ

ಗುರುತಾಗಿ ಉಳಿದವರ.....

ಕೈಯ ಹಿಡಿದವರ ... ಒಡನೆ ನಡೆದವರ ....

ಬಳಗ... ಭಾವ ಚಿತ್ರಗಳ ಸಾಲು

ಎಲ್ಲಕೂ ಸೇರಿ ಸುತ್ತು ಬಂದ

ಗಂಧ ಆರಿದ ಗಂಧದ ಹಾರ....

ಕಳೆದು ಹೋದವರು ಕ್ರಮವಾಗಿ ಕುಂತಿಲ್ಲ

ಅಲ್ಲಿ.......

ವಯಸು ವಯಸಿನ ಸರದಿ ಸಾಲು ಅಲ್ಲ

ಅಂಗಿ ತೊಟ್ಟ ತಂಗಿ..... ಪಟಗ ಸುತ್ತಿದ ಅಪ್ಪ....

ಟೈ ಕಟ್ಟಿದ ಅಣ್ಣ...

ಮುಸುಕು ಸೆರಗಿನ ಅವ್ವ ಕೊನೆಗೆ.......

ಯಾರ ಭಾವಚಿತ್ರದ ನೋಟ

ಯಾರ ಕಣ್ಣಿಗೆ ಉಂಟೋ

ಬದುಕು .... ಆದರೂ... ಇದಕೂ

ಭಾವ ಬಂಧುರದ ನಂಟು

ಅವ್ವ ಅಲ್ಲವೋ ... ನಾ ನಿನ್ನ ಅಕ್ಕ

ಹೇಳದೆ ಹೇಗಿರಲಿ ... ?

ಹೆಕ್ಕದೇ ಹೇಗಿರಲಿ

ಅದು ನನ್ನ ನೆನಪಿನ ಬಿಕ್ಕು.....

ಅನಸೂಯ ಸಿಧ್ಧರಾಮ

8 comments:

Anonymous said...

ಬುತ್ತಿ ಕಟ್ಟಿರುವ ಭಂಗಿ ಚಂದವಿದೆ.
ಬುತ್ತಿಯೊಳಗಿರುವ ಮೃಷ್ಟಾನ್ನದ ರುಚಿಯಂತೂ ಹೇಳಸದಳ. ಎಷ್ಟು ತಿಂದರೂ ಹೊಟ್ಟೆ ತುಂಬುತ್ತಲೇ ಇಲ್ಲ. ಮತ್ತೆ ಮತ್ತೆ ಹಾಕಿಸಿಕೊಂಡು ತಿನಬೇಕೆನಿಸ್ಸುತ್ತಿದೆ. ಈ ಆಹಾರದ ಹಾಹಾಕಾರವನ್ನು ಚಿರಂತನ ಸರಿತೂಗಿಸುತ್ತೀರೆಂದು ನಂಬುವೆ.

http://maavinayanasa.blogspot.com

Anonymous said...

excellent. plz continue your good work

admin said...

ಓದಿ, ನನ್ನ ಅಕ್ಕಳ ನೆನಪಾಯಿತು. ಮೈ ಜುಂ ಅಂತು, ಕಣ್ಣು ಹನಿಯಾಯಿತು.

ಶ್ಯಾಮಾ said...

ನಿಜಕ್ಕೂ ಇದನ್ನು ಓದಿ ನನ್ನ ಗಂಟಲುಬ್ಬಿ ಬಂತು ಕಣ್ಣುಗಳು ಒದ್ಡೆಯಾದವು..... ಮೊನ್ನೆಯಷ್ಟೇ ಮದುವೆಯಾಗಿ ಹೋದ ಅಕ್ಕನ ನೆನಪಾಯ್ಹು.... ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರಾ

Anonymous said...

Reminds me of my grand mother.
Go ahead anyways!
Also, I like the introduction lines. They make me glued to the poem.

----------------------------------------------------------------
If ever you felt you were at a loss because it was so hard to blog in KANNADA. Don't ever
fret again! There's http://quillpad.in/kannada/ just to do it for you!
Try it! Enjoy it!

dinesh said...

ಅಕ್ಕ ..... ಎಂಥಾ ಸೊಗಸಾದ ಪದ್ಯ. ಶಬ್ದಾನೆ ಸಿಗುತ್ತಿಲ್ಲ..ಸೂಪರ್..

Rameshchandra said...

ಅಕ್ಕನ ಬಗೆಗಿನ ಈ ಪದ್ಯ ಓದಿ ನನ್ನ ಬಾಲ್ಯದ ಅಕ್ಕನ ಜೊತೆಗಿನ ಅನುಭವಗಳು ಕಣ್ಣ ಮುಂದೆ ನಿಂತಂತಾಯಿತು. ನಿಮ್ಮ ಪದ್ಯದಲ್ಲಿ ಅಕ್ಕನ ಅಂತಹಕರುಣದ ಚಿತ್ರ ನಿಜಕ್ಕೂ ಸೂಕ್ಷ್ಮ ಸಂವೇದಿಯಾದದ್ದು. ನಿಮ್ಮಲಿರುವ ಅಕ್ಕನ ಮನಸ್ಸನ್ನು ಮರೆಯುವುದಿಲ್ಲ.

Jayalaxmi said...

"ಹುಚ್ಚೀ ಹಳೆ ಹುಚ್ಚಿ..." ಎಲ್ಲಾ ಅವ್ವಂದ್ರೂ ಬೈಯ್ಯೂದು ಹಿಂಗ ಏನೊ!! ನನ್ನವ್ವ ಬೈಯ್ಯೂದೂ ಥೇಟ್ ಹಿಂಗ..:-)
ಭಾರಿ ಛೊಲೊ ಬರ್ದೀರಿ, ಇನ್ನ್ ಮುಂದ ನಿಮ್ಮ ಹೊಸ ಲೇಖನಕ್ಕ ಕಾಯೂವ್ಹಂಗ ಮಾಡಿಬಿಟ್ಟ್ರಿ!! ನಿಮ್ಮ ಈ ಕವನ ತಮ್ಮ ಬ್ಲಾಗೊಳಗ ಹಾಕಿ ನೋಡೂ ಹಂಗ ಮಾಡಿದ ಉದಯ್ ಇಟಗಿ ಸರ್‍ಗೆ ಒಂದ್ ಥ್ಯಾಂಕ್ಸ್.